ಸ್ವಾಗತ

Namaste...!!!ಪ್ರಿಯ ಗೆಳಯ/ತಿಯರೇ ಬ್ಲಾಗ್ ನಲ್ಲಿ ವಿಹರಿಸಿದ ನಂತರ ತಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡುವುದುರ ಮೂಲಕ ತಿಳಿಸಿ. ಸಹಾಯ ಮಾಡಿ. ನಿಮ್ಮ ಸ್ನೇಹಿತ.>

Friday, April 29, 2011

ದೋಣಿ

ನನ್ನ ಕನಸುಗಳ
ಬೋಟ್ ಮಾಡಿ
ಮನೆ ಮುಂದೆ ಹರಿವ
ಮಳೆ ನೀರಿನಲ್ಲಿ ತೇಲಿ ಬಿಟ್ಟು ನಕ್ಕೆ
ಬಾಲ್ಯ ಸರಿಯಿತು,

ಫೀ ಕಟ್ಟಲು ಕಂಡವರ
ಮುಂದೆ ಎಡತಾಕಿ
ದುಡಿದು ಓದಿದೆ
ತೇಲಿ ಬಿಟ್ಟ ದೋಣಿ
ದಡ ಸೇರಿತು,

ಕನಸುಗಳ ತುಂಬಿ
ಸಂಸಾರ ಬೆನ್ನಟಿಕೊಂಡು
ಹರಿಗೋಲು ಹಾಕುವೆ
ಕುಳಿತ ದೋಣಿ ಪಲ್ಟಿ ಹೊಡೆಯುತ್ತದಯೋ?
ಏನೋ

ನೆಲವನರಿಯದ ಆಳ ನೀರಗರ್ಭ
ನೀರ ಓಲಾಟ
ದೋಣಿ ಕೈಬಿಟ್ಟ ನೀರ ಬಯಲಲ್ಲಿ
ನಮ್ಮ ಜೀವಭಯದ ಹೋರಾಟ

ರಟ್ಟೆಗಳಿವೆ
ಈಜು ಬರುತ್ತದೆ..!

Monday, April 25, 2011

ಅವ್ವ

!

ದಡಿಯ ಸೀರೆ
ತಲೆಯ ತುಂಬ ಸೆರಗು
ಕಣ್ಣಂಚಿನಲ್ಲಿ ಮಿಂಚು ಮೂಡಿಸುವ ಬೆಳಕು
ಗೌರವದ ನಗೆಗೆ ದೀಪ ಮಂಕು
ಬಿಸಿ ರೊಟ್ಟಯ ಮುಟಿಗೆ
ತುಸು ಬೆಳ್ಳೋಳ್ಳಿ, ಸಾಕಿಷ್ಟು ಜೀರಿಗೆ
ಪಡಸಾಲಯ ಕಂಬಕೊರಗಿ ಮೆಲ್ಲುತ್ತಲೆ
ತೊಟ್ಟಿಲ್ಲು ಜೀಕುತ್ತ
ನಾಳೆ ಬರುವ ಹುಣ್ಣಿಮೆಗೆ ಮಗಳಿಗೊಂದು ಸೀರೆ
ಬೆಳ್ಳಿ ಉಡದಾರ ಮೊಮ್ಮಗನಿಗೆ,
ದಿಂಬಿಗೊರಗಿದ ತಲೆ ತುಂಬ
ರಾತ್ರಿ ಸಂಸಾರದ್ದೆ ಹಬ್ಬ :
ಐವತ್ತರ ಜೀವ
ತಂತಿ ಬಿಗಿ ಮಾಡಿದ ಶರೀರ,
ಹಂಗಿಲ್ಲದ ಹಟ,
ಇಂದು ಗೂಡು ಹಾಕುವುದು
ನಾಳೆ ತೆನೆ ಮುರಿಯುವುದು
ಬೇಡಿ ಕೇಳಿದರೇ ದನಕ್ಕೆ ಹಿಡಿದಂಟು
ಕಣಕ್ಕೂ ನನ್ನ ಕರೆದಾರು
ಕೈ ಜೋಡಿಸಿದರೆ ಹಿಡಿ ಕಾಳು ಕೊಟ್ಟಾರು
ರಾಶಿ ದಾಟುವ ಮುನ್ನ ಬಾಳ ಕಟ್ಟುವ ಬಯಕೆ
ಒತ್ತಿ ಕಟ್ಟಿದ ಸೆರಗಿನಲ್ಲಿ ಲೋಕ ಮೀರುವ ಛಲ
ಬಿಡುವಿಲ್ಲ,
ಕಟ್ಟೆಯಲ್ಲಿ ಕುಳಿತು ಮಾತು ಕಟೆಯಲು
ದಣಿದು ಬಂದ ದೇಹಕ್ಕೆ ಹಂಡೆಯಲಿ ನೀರಿಲ್ಲ
ಕಾಲ್ತೋಳೆಯಲು,
ಯಾರಿಗೆ ಬೇಕೂ ಮಕ್ಕಳು
ಗಂಡ ದಂಡಪಿಂಡ
ಚಿಮಣಿಗೆ ಎಣ್ಣೆ ಹಾಕುವ ಹತ್ತು
ಎರಡು ಕೊಡ ನೀರು ಹೊತ್ತು
ಕಸಗೂಡಿಸಿ ದೀಪ ಹಚ್ಚಿದರೇ
ಜಗುಲಿಯ ಮೇಲಿನ ದೇವರ ಮುಖದಲಿ
ಮಂದಹಾಸ
ಮನೆತುಂಬ ಬೆಳದಿಂಗಳು
ದಡಿ ಸೀರೆಯ ಮುಖದಲ್ಲಿ ದಣಿವಿಲ್ಲದ ನಗೆ
ಅವ್ವನೆದುರಿಗೆ ದೇವತೆಗಳಿಗೂ ಹಗೆ!!!!