ಸ್ವಾಗತ

Namaste...!!!ಪ್ರಿಯ ಗೆಳಯ/ತಿಯರೇ ಬ್ಲಾಗ್ ನಲ್ಲಿ ವಿಹರಿಸಿದ ನಂತರ ತಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡುವುದುರ ಮೂಲಕ ತಿಳಿಸಿ. ಸಹಾಯ ಮಾಡಿ. ನಿಮ್ಮ ಸ್ನೇಹಿತ.>

Wednesday, December 31, 2008

ನಿನ್ನ ಮುಡಿಗೆ ಮಲ್ಲಿಗೆ ಮುಡಿಸುವಾಸೆ..

ಟೊಕ್ಕಿ…..ಇದು ನಾನು ಬರೆಯುತ್ತಿರುವ ಮೊದಲ ತೊದಲ ಪತ್ರ.ನಾನು ಸುಳ್ಳು ಹೇಳುತ್ತಿದ್ದೀನಿ ಟೊಕ್ಕಿ, ನಂಬಬೇಡ ನನ್ನ.. ನಾನು ಬರೆದು ನಿನಗೆ ಕಳಿಸಲಾಗದ ಅಸಂಖ್ಯಾತ ಪತ್ರಗಳಲ್ಲಿ ಇದು ಒಂದು ಪತ್ರವಾಗದೇ ಇದ್ದರೆ ಸಾಕು ಟೊಕ್ಕಿ. ಜನ ನಗ್ತಾರೆ ಕಣೆ, ಕಾಲೇಜ್ ಹುಡುಗ ನಾನು.ನನ್ನ ರೂಮು ಯಾವ್ ತರ ಇರಬೇಕು ಹೇಳು? ಹಾಲಿವುಡ್ ಬಾಲಿವುಡ್ ಚಿತ್ರಗಳ ಅಮಲು ಅಮಲು ನಟಿಯರ ಗೋಡೆ ಚಿತ್ರಗಳು? ಪೋಲಿ ಗೆಳೆಯರು ಕದ್ದುಮುಚ್ಚಿ ಕೊಟ್ಟಂತ ನೀಲಿ ನೀಲಿ ಪೀಡೆ ಚಿತ್ರಗಳ ಜೊಲ್ಲು ಜೊಲ್ಲು ಸೀಡಿಗಳು? ಇಲ್ಲ ಟೊಕ್ಕಿ ಅದಕ್ಕೆ ಹೇಳಿದ್ದು ಜನ ನಗ್ತಾರೆ ಕಣೆ ಅಂತ. ಕೇಳಿಲ್ಲಿ ನೀನು ನನಗೆ ಮೊದಲು ಮೊದಲು ತೊದಲುತ್ತ ಕೊಟ್ಟು ಜಿಂಕೆಮರಿಯಂತೆ ಓಡಿಹೋದೆಯಲ್ಲ ಅದೇ ಪುಟಾಣಿ ನವಿಲುಗರಿ, ನನ್ನ ದೇವರ ಮನೆಯಂತ ಪುಟಾಣಿ ಕೋಣೆಯಲ್ಲಿ ಬೆಚ್ಚಗೆ ಕುಳಿತಿದೆ. ಮತ್ತೆ ನಾನು ಇದುವರೆಗು ಬರೆದು ನಿನಗೆ ಕಳಿಸಲಾಗದ ಒಟ್ಟು ನೂರ ನಲವತ್ತೆರೆಡು ಪತ್ರಗಳು ನಿನ್ನ ನವಿಲುಗರಿ ಜೊತೆಯಲ್ಲಿ ಕುಳಿತಿವೆ. ಇದು ನನ್ನ ನೂರ ನಲವತ್ತಮೂರನೆಯ ಪತ್ರ.. ಟೊಕ್ಕಿ ಐ ವ್ ಯು ಕಣೆ. ದೇವರ ಚಿತ್ರದ ಪಕ್ಕದಲ್ಲಿಯೆ ನಾನು ಕದ್ದು ಮುಚ್ಚಿ ತೆಗೆದ ನಿನ್ನ ಚಿತ್ರ ದೇವರಿಗೆ ಪೈಪೋಟಿ ಹೊಡೆಯುವಂತೆ ಕುಳಿತಿದೆ. ಬೆಳಗ್ಗೆ ಎದ್ದು ಯಾರ ಮುಖ ನೋಡಲೀ ಅಂತ ತಳಮಳ ಶುರುವಾಗುತ್ತೆ. ಕೋಪ ಬೇಡ ಕಣೆ ನಾನು ದೇವರ ಮುಖವನ್ನೆ ಮೊದಲು ನೋಡೋದು. ಯಾಕಂದ್ರೆ ಜೀವನ ಪೂರ್ತಿ ನಿನ್ನ ಪುಟಾಣಿ ಮುಖವನ್ನ ನೋಡುತ್ತ ಇರಬೇಕಲ್ಲವ ನಾನು? ಅದಕ್ಕೆ ಆ ದೇವರ ದಯೆ ಬೇಕಲ್ವ ಟೊಕ್ಕಿ?

.
.ಯಾಕೊ ಗೊತ್ತಿಲ್ಲ ಇವತ್ತು ದೇವಸ್ಥಾನಕ್ಕೆ ಹೋಗ್ಲೆಬೇಕು ಅನ್ನಿಸ್ತು ಗೊತ್ತ. ಅದು ಗಾಳಿಆಂಜನೇಯನ ಸನ್ನಿಧಿ. ಪೂರ್ತಿ ಏಳು ಸುತ್ತು ಹೊಡೆದೆ. ಅದರರ್ಥ ನಿನ್ನ ಜೊತೆ ಏಳು ಹೆಜ್ಜೆ ಹಾಕಬೇಕು ಅಂತನ? ಅಥವ ಏಳು ಜನುಮಗಳಲ್ಲೂ ನೀನು ನನ್ನ ಪ್ರೀತಿಯ ಗುಬ್ಬಚ್ಚಿ ಹುಡುಗಿ ಅಂತಾನ? ಗೊತ್ತಿಲ್ಲ ಟೊಕ್ಕಿ ನನಗೆ. ಈ ಏಳು ಹೆಜ್ಜೆಗಳಲ್ಲಿ ನಂಬಿಕೆ ಇಲ್ಲ ಕಣೆ. ನನ್ನ ಜೀವನದಲ್ಲಿ ನಾನು ಇಡುವ ಪ್ರತಿ ಹೆಜ್ಜೆಯಲ್ಲೂ ನಿನ್ನದೊಂದು ಹೆಜ್ಜೆ ಜೊತೆಯಾಗಿರುತ್ತೆ, ಜೊತೆಯಾಗಿರಬೇಕು. ಅದೇನದು ಏಳು ಜನ್ಮ? ಈ ಜನುಮದಲ್ಲಿ ನನ್ನ ಜೊತೆಯಿರಬೇಕು ನೀನು ಕೊನೆಯವರೆಗು. ಇನ್ನು ಉಳಿದ ಎಲ್ಲಾ ಜನುಮಗಳಲ್ಲು ನಾನು ನಿನ್ನ ಜೊತೆ ಇರ್ತೀನಿ..ಇಷ್ಟು ಸಾಕಲ್ವ. ಅದೇನೋ ಆಂಜನೇಯನಂತ ಅಜನ್ಮ ಬ್ರಹ್ಮಚಾರಿಗೆ ಮತ್ತು,ನಿನ್ನ ಜೊತೆ ಮದುವೆಯಾಗಿ ಡಜನ್ ಡಜನ್ ಪಾಪುಪುಟಾಣಿಗಳನ್ನ ಮುದ್ದಾಡುವ ಯೋಜನೆ ಹಾಕಿಕೊಂಡಿರುವ ನನ್ನಂತವನ ಪ್ರಾರ್ಥನೆ ಇಷ್ಟವಾಯಿತು ಅನ್ನಿಸುತ್ತೆ ಬಲಗಡೆಯ ಪ್ರಸಾದ ಕಣೆ. ಅಷ್ಟೆ ಅಲ್ಲ ಬರುವಾಗ ಮೊಳಗುತ್ತಿದ್ದ ಘಂಟೆಯ ಸದ್ದಿನಲ್ಲಿ ಯಾವುದೋ ಪ್ರೇಮಗೀತೆಯ ಘಮ ಸುಮ

.
ಈ ಸಲ ಖಂಡಿತ ಮಿಸ್ಸ್ ಮಾಡೋದೆ ಇಲ್ಲ ಈ ಪತ್ರವನ್ನ ನಿನಗೆ ತಲುಪಿಸ್ತೀನಿ. ಹೊಳೆದಂಡೆಯ ಪಕ್ಕದಲ್ಲಿರುವ ಮಲ್ಲಿಗೆ ತೋಟದ ಹತ್ರ ಬರ್ತೀಯ ಅಲ್ವ ನೀನು? ಆ ಮಾರಮ್ಮನ್ ತರ ಸೀರೆ ಸುತ್ತಿಕೊಂಡು ಬರಬೇಡ ನೋಡು ನನಗೆ ಇಷ್ಟ ಅಗಲ್ಲ. ನಿನಗೆ ಕಪ್ಪು ಚೂಡಿ ತುಂಬಾ ಒಪ್ಪುತ್ತೆ. ಮೊದಲು ತಲೆಗೆ ಹರಳೆಣ್ಣೆ ಹಾಕೋದು ಕಮ್ಮಿ ಮಾಡು. ಮತ್ತೊಂದು ವಿಷ್ಯ ಈ ಸಲ ತಲೆ ತುಂಬ ಹೂವು ಮುಡಿದುಕೋಂಡು ಬರಬೇಡ. ನಿನಗೇ ಅಂತಾನೆ ಮಲ್ಲಿಗೆ ತೋಟದಲ್ಲಿ ಮೊಗ್ಗುಗಳನ್ನ ಕದ್ದು ತೆಗೆದಿಟ್ಟುಕೊಂಡಿರುತ್ತೇನೆ.ಮಲ್ಲಿಗೆ ಮೊಗ್ಗುಗಳ ಮಾಲೆ ಮಾಡಿ ನಾನೆ ನಿನಗೆ ಮುಡಿಸಬೇಕು ಅಂತ ತುಂಬಾ ಇಷ್ಟ ಕಣೆ. ಅಷ್ಟೆ ಅಲ್ಲ ನನ್ನ ನೂರ ನಲವತ್ತಮೂರು ಪತ್ರಗಳನ್ನು ನಿನ್ನ ಮಡಿಲಲ್ಲಿ ಓದಿ ಒದಿ ಹೇಳಬೇಕು. ನೀನು ಇಷ್ಟಗಲ ಕಣ್ಣರಳಿಸಿ ನೋಡೊದನ್ನ ನನ್ನ ಪುಟಾಣಿ ಕಣ್ಣುಗಳಲ್ಲಿ ತುಂಬಿಕೊಳ್ಳಬೇಕು. ಬರ್ತೀಯ ಅಲ್ಲವೇನೆ?
ನಿನ್ನ ಚೋಮು

ಎದೆಯ ಅಣೆಕಟ್ಟು ಕಟ್ಟೆಯೊಡೆಯುತ್ತಿದೆ......


ನಾನು ನಿನ್ನ ರಸ್ತೆಯಲ್ಲಿ
ಕೊನೆಯವರೆಗೂ ಸಾಗಬೇಕಿತ್ತು,
ಮದ್ಯೆ ಮದ್ಯೆ ದಾರಿ ಹರಿದಿತ್ತು
ಮತ್ತೆ ಬೆಳಕು ಮುನಿದಿತ್ತು.
ಪೂರ್ತಿಯಾಗುವ ಮೊದಲೆ
ಪ್ರಯಾಣ ಮುಗಿದಿತ್ತು.

ನಿನಗೇ ಅಂತ ನಾನು
ಬರೆದಿಟ್ಟ ಹಾಡುಗಳ
ಎಲ್ಲಾ ಸಾಲುಗಳು
ಅಳಿಸಿಹೋಗಿದ್ದವು
ಮತ್ತೆ ಬೆರೆಯೋಣವೆಂದರೇ
ನೀನು ನೆನಪಾಗುತ್ತಿದ್ದಿಯಾ
ಮತ್ತೆ ನೆನಪಾಗುತ್ತಿಲ್ಲ!

ಹಾಗೆ ಒಂದು ಸಲ ಅತ್ತು
ಬಿಡೋಣವೆಂದು ಕೊಂಡರೇ
ನಿನಗೆ ಕೊಟ್ಟ ಮಾತು, ಮತ್ತೆ
ಅತ್ತಾಗ ನೀನಿಟ್ಟ ಮುತ್ತು ನೆನಪಾಯಿತು.!
ದುಃಖ ನುಂಗಿಕೊಂಡೆ..ಅದರೂ
ಮಾತು ಉಳಿಸಿಕೊಳ್ಳಲಾಗುತ್ತಿಲ್ಲ
ಎದೆಯ ಅಣೆಕಟ್ಟು ಕಟ್ಟೆಯೊಡೆಯುತ್ತಿದೆ !

ಎಲ್ಲಾ ನೆನಪುಗಳಿಗೂ
ಒಂದು ಸಮಾಧಿ ಕಟ್ಟಿಸಬೇಕು!
ಎಲ್ಲಾ ಹನಿಗಳಿಗೂ ಒಂದು
ದೊಡ್ಡ ನದಿಯ ಹುಡುಕಬೇಕು !
ಮತ್ತೆ ನಾನು ದೂರ ದೂರ ಹೋಗಬೇಕು
ಕ್ಷಮಿಸು ಅಲ್ಲಿ ನೀನು ನೆನಪಾಗೊಲ್ಲ
ಮತ್ತೆ ನೆನಪಾಗಬಾರದು ಕೂಡ!