
ನಿದ್ದೆಯ ಬೇಲಿಯ ಕನಸಿನ ಬನದಲಿ ಆಡುವ ಹೆಣ್ಣೆ, ನೀನಾರು ?
ಕಾಮನ ಬಿಲ್ಲಿನ ಸೀರೆಯ ಹೆಣ್ಣೆ, ಜಡೆಯಲಿ ತಾರೆಯ ಮುಡಿದಿಹ ಹೆಣ್ಣೆ,
ಮಿಂಚುವ ಕಂಗಳ ಸಂಚಿನ ಹೆಣ್ಣೆ, ಬಿಂಕದ ಹೆಣ್ಣೆ, ನೀನಾರು ?
ಎತ್ತಿದ ಮುಖವೊ ಚೆಲುವಿನ ಗೋಪುರ ; ಕಂಗಳೊ ಕಳಸದ ಜೊತೆದೀಪ,
ಕೊರಳೊ ಕೇಳದ ದನಿಯ ವಿಮಾನ - ಹೃದಯದ ಮರುಳೆ, ನೀನಾರು ?
ವಸಂತ ಹಸೆಮಣೆ ನಿನ್ನ ಹಣೆ; ನಡುವೆ ಕುಂಕುಮದ ಚಿತ್ರಲತೆ -
ಕರೆದರೆ ನಿಲ್ಲದೆ ತಿರುಗಿ ನೋಡದೆ ತೆರಳುವ ಹೆಣ್ಣೆ, ನೀನಾರು ?
ಕನಸಿನ ಬನದಲಿ ಕಮಲಾಕರದಲಿ ಕನಕ ವೀಣೆಯನು ದನಿಮಾಡಿ,
ನನ್ನ ನೆರಳಿಗೇ ಯೋಜನ ಹಾರುವ ಒಲಿಯದ ಹೆಣ್ಣೆ, ನೀನಾರು ?
ಕೆನ್ನೆಯ ಬಾನಲಿ ಮುತ್ತಿನ ಚಂದಿರ ಮೂಡದ ಹೆಣ್ಣೆ, ನೀನಾರು ?
ಪ್ರೇಮಪದಪದುಮ ಸೋಂಕದ ಮಂದಿರ ಮಾಯಾಮೋಹಿನಿ, ನೀನಾರು ?