ಸ್ವಾಗತ

Namaste...!!!ಪ್ರಿಯ ಗೆಳಯ/ತಿಯರೇ ಬ್ಲಾಗ್ ನಲ್ಲಿ ವಿಹರಿಸಿದ ನಂತರ ತಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡುವುದುರ ಮೂಲಕ ತಿಳಿಸಿ. ಸಹಾಯ ಮಾಡಿ. ನಿಮ್ಮ ಸ್ನೇಹಿತ.>

Saturday, December 13, 2008

ಕಡ್ಡಾಯವಾಗಿ ವಯಸ್ಕರಿಗೆ ಮಾತ್ರ !

ಪ್ರತಿವರ್ಷವೂ ಶಾಲೆಗೆ ಅಧಿಕೃತ ಚಕ್ಕರ್ ಹಾಕಿ ರೋಣಕ್ಕೆ ಹೋಗಿ "ಅಬ್ಬಿಗೇರಿ To ನರೇಗಲ್" ವಿದ್ಯಾರ್ಥಿ ಬಸ್ ಪಾಸ್ ಪಡೆಯುವದು ನಮ್ಮೂರ ವಿದ್ಯಾರ್ಥಿಗಳ ಸತ್ಸಂಪ್ರದಾಯ.ಪಾಸಿನ ನೆಪ ಹೇಳಿ ಶಾಲೆ ತಪ್ಪಿಸಿದರೆ ಯಾವ ಮಾಸ್ತರನೂ ಕೆಮ್ಮಂಗಿಲ್ಲಾ ಅನ್ನೊದು ಒಂದು ಕಾರಣವಾದರೆ, ಪಾಸಿನ ನೆಪದಲ್ಲಿ ಅಧಿಕೃತವಾಗಿಯೇ ರೋಣದ ಪ್ಯಾಟಿಯ ಚೈನಿ ಹೊಡೆಯುವದೂ ಇನ್ನೊಂದು ಕಾರಣವಾಗಿತ್ತು. ನಮ್ಮೂರ ಎಲ್ಲಾ ಸತ್ಸಂಪ್ರದಾಯಗಳನ್ನು ಬಲು ನಿಷ್ಠೆಯಿಂದ ಪಾಲಿಸುವ ನನಗೆ ಹಿಂತಹ ಅವಕಾಶವನ್ನು ತಪ್ಪಿಸಿಕೊಳ್ಳಲು ಬೇರೆ ಕಾರಣಗಳೇ ಇರುತ್ತಿರಲಿಲ್ಲ.ಹೀಗಾಗಿ ನಾನು, ಶೆಟ್ಟರ ಸಣ್ಯಾ,ಮೂಲಿಮನಿ ಚಂದ್ರ ಮತ್ತು ನಮ್ಮ ಕ್ಲಾಸಿನ ಹಿರಿ ವಿಧ್ಯಾರ್ಥಿಯಾದ ಮತ್ತು ನಮಗೆಲ್ಲಾ ಗುರು ಸಮಾನನಾದ ಜುಮ್ಮಿ ಎಲ್ಲರೂ ಸೇರಿ ನಮ್ಮ ಯೋಗ್ಯತಾನುಸಾರವಾಗಿ ಟಾಕು ಟೀಕಾಗಿ ರೋಣದ ಸವಾರಿಗೆ ಸಿದ್ದರಾಗಿ ಹೊರಡುತ್ತಿದ್ದೆವು.. ನನ್ನ ನೆನಪಿನಂತೆ ನಾವು ಆವಾಗ ಒಂಬತ್ತನೇ ಇಯತ್ತೆಯಲ್ಲಿ ಓದುತ್ತಿದ್ದೆವು(?) , ಆ ವರ್ಷವೂ ನಮ್ಮ ಪಟಾಲಂ ಮಾಮೂಲಿನಂತೆ ಬಸ್ಸಿನ ಟಾಪನ್ನೇರಿ ರೋಣಕ್ಕೆ ಹೊರಟು ನಿಂತೆವು.. ರೋಣದ ಬಸ ಸ್ಟ್ಯಾಂಡಿನಲ್ಲಿ ಆಗಲೇ ಬೇರೆ ಊರುಗಳ ವಿಧ್ಯಾರ್ಥಿಗಳು ಬಂದು ಠಳಾಯಿಸಿದ್ದರು..

ರೋಣದ ಬಸ ಸ್ಟ್ಯಾಂಡು ಅಂದರೆ ಬೆಂಗಳೂರಿನ ಕಲಾಸಿಪಾಳ್ಯಕ್ಕೆ ಕೊಳಕಿನಲ್ಲಿ ಯಾವುದಕ್ಕೂ ಕಮ್ಮಿಯಿಲ್ಲಾ. ಆದರೆ ರೋಣದ ಬಸ್ ಸ್ಟ್ಯಾಂಡಿನ ಹಿರಿಮೆಯಿರುವುದು ಅಲ್ಲಿನ ದೊಡ್ದ ಮೂತ್ರಾಲಯದಲ್ಲಿ. ಯಾಕೆಂದರೆ ಅದೊಂತರಾ ರೋಣ ತಾಲೂಕಿನ ಪ್ರೇಮಿಗಳ ನೋಂದಣಿ ಕಚೇರಿಯಿದ್ದಂತೆ. ಎಲ್ಲಾ ಮಜ್ನುಗಳು ತಮ್ಮ ಲೈಲಾಗಳ ಹೆಸರುಗಳನ್ನು ಆ ಪಾಯಖಾನೆಯ ಗೋಡೆಯ ಮೇಲೆ ಬರೆದು ’ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು’ ಅಂತಾ ಹಾಡುತ್ತಾ ತಮ್ಮ ಪ್ರೇಮ ಚರಿತ್ರೆಯನ್ನು ಇಡಿ ತಾಲೂಕಿಗೆ ಸಾರಿಬಿಡುತ್ತಿದ್ದರು. ಆದರೆ ಇವರ ’ಎದೆಗಾರಿಕೆ’ ಅವರ ಮಜ್ನುಗಳಿಗೆ ಭಲು ಮುಜುಗುರ ತಂದಿಕ್ಕುತ್ತಿತ್ತು.. ಹೀಗಾಗಿ ಹುಡುಗಿಯರೂ ಸಹ ತಮ್ಮ ಹೆಸರೂ ಸಹ ’ನೋಂದಣಿ’ ಯಾಗಿದೆಯಾ ಅಂತಾ ಕದ್ದು ಕದ್ದು ಗಂಡಸರ ಪಾಯಖಾನೆ ಕಡೆಗೆ ನೋಡುವುದು ಸಾಮಾನ್ಯವಾಗಿತ್ತು..ಇವರ ಈ ದೆಶೆಯಿಂದ ಇಡಿ ಪಾಯಖಾನೆಯ ಗೋಡೆ ಹಲವಾರು ಹೆಸರುಗಳು, ಬಾಣ ಚುಚ್ಚಿರುವ ಹೃದಯದ ಚಿತ್ರಗಳಿಂದ ತುಂಬಿ ಹೋಗಿತ್ತು, ಜೊತೆಗೆ ಮೂಲೆಯಲ್ಲಿ ಇದು ಗಂಡಸರ ಮಾತ್ತು ಹೆಂಗಸರ ಪಾಯಖಾನೆ ಎಂದು ಪ್ರತ್ಯೇಕಿಸಲು ಒಂದೊಂದು ಗಂಡು- ಹೆಣ್ಣಿನ ಚಿತ್ರಗಳು ಕಾಣಬಹುದಾಗಿತ್ತು.

ಈ ಪಾಯಖಾನೆಗೆ ಅಭಿಮುಖವಾಗಿ ಇರುವ ಕಿಡಕಿ ಮೂಲಕವೇ ನಮಗೆಲ್ಲಾ ಪಾಸು ವಿತರಿಸುವ ಕಾರ್ಯಕ್ರಮ ಇರುತ್ತಿತ್ತು. ಯಥಾಪ್ರಕಾರ ಜುಮ್ಮಿ ಪಾಳಿಯಲ್ಲಿ ನಿಲ್ಲದೇ ಉಳಿದವರಿಗೆ ರೋಪ್ ಹಾಕಿ, ಕಾದಾಡಿ ಬಡಿದಾಡಿ ಬೇಗನೆ ನಮಗೆಲ್ಲರಿಗೂ ಬೇಗನೆ ಪಾಸು ತಂದು ಕೊಟ್ಟ. ನಮ್ಮ ಮುಂದಿನ ಕಾರ್ಯಕ್ರಮವನ್ನು ನಾನು ಜುಮ್ಮಿ ರಾತ್ರಿಯೇ ಫಿಕ್ಸ ಮಾಡಿ ಬಿಟ್ಟಿದ್ದೆವು.. ಪ್ಲಾನಿನಂತೆ ಜುಮ್ಮಿ " ಸುಮ್ನೆ ಅಡ್ದಾಡುವುದಕ್ಕಿಂತ ನಾವು ಪಿಚ್ಚರಿಗೆ ಹೋಗೊಣ" ಅಂತ ಅನೌನ್ಸ ಮಾಡಿದ.

ನಾನು ಮಳ್ಳನಂತೆ " ಯಾವ ಪಿಚ್ಚರೆಲೇ ಜುಮ್ಮಿ? ರಾಮಾಚಾರಿ ಪಿಚ್ಚರು ಮೊನ್ನೆ ಟಿವಿಲೇ ಬಂದಿತ್ತಲ್ಲಾ!" ಎಂದು ಜುಮ್ಮಿ ಹೇಳುತ್ತಿರುವದು "ಆ ತರದ" ಚಿತ್ರದ ಬಗ್ಗೆ ಅಂತ ಗೊತ್ತಿದ್ದರೂ ಮುಗ್ದನಂತೆ ನಟಿಸಿದೆ..

ಆಗ ಜುಮ್ಮಿ ಗತ್ತಿನಿಂದ" ಲೇ ಪ್ಯಾಲಿ ಗೌಡ! ರಾಮಾಚಾರಿ ನೋಡಾಕ ನೀವೆಲ್ಲಾ ಇನ್ನೂ ಪ್ರೈಮರಿ ಸಾಲಿ ಹುಡುಗ್ರಾ?, ಮಕ್ಳಾ ಲಗ್ನಾ ಮಾಡಿದ್ರ ಮೂರು ಮೂರು ಮಕ್ಳ ಹಡೀತಿರಿ, ರಾಮಾಚಾರಿ ಅಂತೆ ರಾಮಾಚಾರಿ" ಅಂತ ಹುಸಿಕೋಪದಿಂದ ನಾವೂ ನೋಡ ಹೊರಟಿರುವ ಚಿತ್ರದ ಬಗ್ಗೆ ಸುಳಿವು ಕೊಟ್ಟ.
ಆದರೂ ಸಣ್ಯಾ, ಚಂದ್ರರಿಗೆ ಇನ್ನು ಅರ್ಥವಾಗದ್ದನ್ನು( ಅಥವಾ ಅರ್ಥವಾಗದವರಂತೆ ನಟಿಸುತ್ತಿದ್ದರೋ ಗೊತ್ತಿಲ್ಲಾ) ಕಂಡು ಜುಮ್ಮಿಗೆ ಅವರ ’ಜನರಲ್ ನಾಲೇಜ್’ ಬಗ್ಗೆ ಕನಿಕರವೆನಿಸಿ " ಲೇ ಹುಚ್ಚಪ್ಯಾಲಿ ನನ್ ಮಕ್ಳ ನಾವೀಗ ಒಂದೂವರೆ ತಾಸಿನ ಪಿಚ್ಚರಿಗೆ ಹೋಗುಣು" ಅಂತ ತಿಳಿ ಹೇಳಿ ಪಿಚ್ಚರಿನ ಹೆಸರು " ಆಡಂ and ಈವ The first love story" ಅಂತಲೂ ವಿವರಿಸಿದ.

ನಾನು ಆಗಲೇ ತುಂಬಾ ದೊಡ್ದವನಾಗಿದ್ದೆ ಅಥವಾ ಹಾಗಂತ ಅಂದುಕೊಂಡಿದ್ದೆ, ಹೀಗಾಗಿ ಜುಮ್ಮಿಯ ಈ ಆಫರ್ರು ನಾನು ’ದೊಡ್ದವನು" ಅಂತಾ ಅದಿಕೃತವಾಗಿ ಸಾರಲು ಸಿಕ್ಕ ವೇದಿಕೆಯೇ ಸರಿ ಅಂದುಕೊಂಡು "ಒಂದೂವರೆ ತಾಸಿ"ನ ಚಿತ್ರ ನೋಡಲು ರಾತ್ರಿಯೇ ಸಮ್ಮತಿಸಿದ್ದೆ. ಶೆಟ್ಟರ ಸಣ್ಯಾ ಮೊದಮೊದಲು ಅನುಮಾನಿಸಿದ, ನಂತರ ಜುಮ್ಮಿ ಅವನಿಗೆ ನಾವೂ ನೋಡ ಹೊರಟಿರುವುದು ವೈಜ್ಣಾನಿಕ ಕಮ್ ಸಾಮಾಜಿಕ ಚಿತ್ರವೆಂದೂ, ಅದರಲ್ಲಿ ಮಾನವನ ಜನಾಂಗ ಹೇಗೆ ಬೆಳೆದುಬಂತು, ನಮ್ಮ ಪೂರ್ವಜರು ಯಾರು ಇತ್ಯಾದಿ ಇತಿಹಾಸದ ಅಂಶಗಳನ್ನು ಹೇಳಿದ್ದಾರೆಂದೂ, ಜೊತೆಗೆ ಬಯೋಲಾಜಿಯ ಅನೇಕ ವಿಷಯಗಳನ್ನು ’ನೋಡಿ’ ತಿಳಿಯಬಹುದು ಅಂತಲೂ, ಸಮಾಜ ಮತ್ತು ವಿಜ್ಣಾನ ಓದದೇ ಪಾಸಾಗಬಹುದೆಂದು ಆಸೆ ಹುಟ್ಟಿಸಿದ. ಮೊದಲೇ ಹುಟ್ಟಾ ಬೃಹಸ್ಪತಿಯಾದ ಸಣ್ಯಾನಿಗೆ "ಪಠ್ಯ ಮತ್ತು ಪಠ್ಯೇತರ" ಸಂಗಮವಾದ ಈ ಚಿತ್ರವನ್ನು ನೋಡದಿರುವುದು ತನ್ನ ವಿಧ್ಯಾರ್ಥಿ ಜೀವನದಲ್ಲಿ ತುಂಬಲಾರದ ನಷ್ಟ ಅನಿಸಿ ಚಿತ್ರ ನೋಡಲೂ ಸಣ್ಯಾನೂ ಸಮ್ಮತಿಸಿದ.

ಆದರೆ ಚಂದ್ರ ಮಾತ್ರ ತನ್ನ ಕ್ಯಾರೆಕ್ಟರ್ ಸರ್ಟಿಫೀಕೆಟ್ ತೆಗೆದು ತುಂಬಾ ಒಳ್ಳೆಯ ಹುಡುಗನಂತೆ ಆಡತೊಡಗಿದ. ಜುಮ್ಮಿ ನಾನಾ ತರದಲ್ಲಿ ಚಿತ್ರದ ವರ್ಣನೆ ಮಾಡಿ ಚಿತ್ರ ನೋಡುವದರಿಂದ ನಿನ್ನ ಕ್ಯಾರೆಕ್ಟರ್ರು ಹಾಳಾಗುವದಿಲ್ಲಾ, ಚಿನ್ನ ಎಲ್ಲಿಟ್ಟರೂ ಚಿನ್ನವೇ ಅಂತೆಲ್ಲಾ ಪುಸಲಾಯಿಸಿದರೂ ಜಪ್ಪೆನ್ನಲಿಲ್ಲ. ಕೊನೆಗೆ ನಾನು ನಮ್ಮ ಹುಡುಗರ ಮರ್ಮಕ್ಕೆ ತಾಗುವ ಅಸ್ತ್ರ ತೆಗೆಯಲೇಬೇಕಾಯ್ತು. " ಲೇ ಚಂದ್ರ್ಯಾ! ನೀ ನಿಜವಾಗ್ಲೂ ಗಂಡಸಾಗಿದ್ದರೆ ನಮ್ಮ ಜೊತೆ ಬಾ, ಇಲ್ಲಾಂದ್ರೆ ರೋಣದ ಸಂತ್ಯಾಗ ಬಳಿ ಇಟ್ಕೋಂಡು ಊರ ಕಡೆ ನಡಿ. ನೀ ಎಂಥ ಗಂಡಸಲೇ?" ಅಂತ ಅಂದುಬಿಟ್ಟೆ. ಅದು ತಾಕಬೇಕಾದ ಜಾಗಕ್ಕೆ ತಾಕಿ ತಾನೂ ಗಂಡಸು ಅಂತ ನಿರೂಪಿಸಲಾದರೂ ನಮ್ಮ ಜೊತೆ ಬರಬೇಕಾಯ್ತು.. ಅಂತೂ ಇಂತೂ ನಮ್ಮ ನಾಲ್ವರ ಸವಾರಿ ವಿ.ಎಫ್ ಪಾಟೀಲ್ ಹೈಸ್ಕೂಲಿನ ಪಕ್ಕದ ಹಳೆ ಥೇಟರಿನತ್ತ ಸಾಗಿತು. ದಾರಿಯಲ್ಲಿ ಜುಮ್ಮಿ ಮೊದಲ ಬಾರಿಗೆ ಆ ತರದ ಚಿತ್ರ ನೋಡಲು ಹೋಗುತ್ತಿರುವವರಿಗೆ "ಕೋಡ್ ಆಫ್ ಕಂಡಕ್ಟ್ಸ" ಹೇಳಿಕೊಡತೊಡಗಿದ, ಥೇಟರಿನಲ್ಲಿ ಚಿಕ್ಕವರನ್ನೂ ಬಿಡುವುದಿಲ್ಲವೆಂದೂ, ಅದು ದೊಡ್ದವರ ಚಿತ್ರವಾಗಿದ್ದರಿಂದ ನಮ್ಮ ವಯಸ್ಸು ಕೇಳಿದರೆ ಹದಿನೆಂಟು ಅಂತ ಹೇಳಬೇಕೆಂದೂ ಮತ್ತು ಯಾರಾದ್ರೂ ಕೇಳಿದ್ರೆ ಸುಳ್ಳು ಹೆಸರು ಹೇಳಬೇಕೆಂದೂ ತಾಕೀತು ಮಾಡಿದ. ನಾವೆಲ್ಲಾ ಗುರು ಭಕ್ತಿಯಿಂದ ಹೂಂಗುಟ್ಟಿದೆವು. ಕೊನೆಗೂ ಥೇಟರ್ ಬಳಿ ಬಂದಾಗ ಥೇಟರ್ ಖಾಲಿ ಹೊಡೆಯುತ್ತಿತ್ತು. ಅಲ್ಲಲ್ಲಿ ಚಿತ್ರದ ಪೊಸ್ಟರುಗಳನ್ನು ಅಂಟಿಸಿದ್ದರು ಮತ್ತು ಪೊಸ್ಟರಿನ ಕೆಲಬಾಗಗಳನ್ನು ನೀಲಿ ಬಣ್ಣದಿಂದ ಅಳಿಸಿದ್ದರು, ಜೊತೆಗೆ ಅಲ್ಲಿ ಗೋಡೆಯ ಮೇಲೆ ದೊಡ್ದದಾಗಿ "ವಯಸ್ಕರಿಗಾಗಿ ಮಾತ್ರ" ಎಂದು ಬರೆದಿದ್ದು ನೋಡಿ ನಾವೆಲ್ಲಾ ಒಮ್ಮೆ ಇಡೀ ಅಬ್ಬಿಗೇರಿಗೆ ಹಿರಿಯರಾದಂತೆ ಭಾಸವಾಯಿತು. ಒಳ ಹೊಕ್ಕು ಕೂತರೇ ಆಗಲೇ ಚಿತ್ರ ಶುರುವಾಗಿತ್ತು.

ಚಿತ್ರ ಇಂಗ್ಲೀಷನಲ್ಲಿದ್ದುದರಿಂದ ನಮಗಂತೂ ಅರ್ಥವಾಗುವ ಸಂಭವವೇ ಇರಲಿಲ್ಲಾ, ಆದರೂ ನಾನು ತಿಳಿದವನಂತೆ ಬಾಯಿಗೆ ಬಂದಂಗೆ ಅನುವಾದ ಮಾಡಿ ಉಳಿದವರ ಮುಂದೆ "ಶಾಣ್ಯಾ" ಅನ್ನಿಸಿಕೊಳ್ಲಲು ಯತ್ನಿಸಿದರೂ, ಆ ಮುಂಡೆವು ಕೇಳುವುದಕ್ಕಿಂತಲೂ "ನೋಡಲು" ತುಂಬಾ ಉತ್ಸುಕರಾದುದರಿಂದ ನನ್ನ ಪ್ರಯತ್ನಗಳು ಹುಸಿಯಾದವು. ಚಿತ್ರ ಸಾಗಿದಂತೆ ಆಡಂ ಆಪಲ್ ತಿನ್ನುವ ಅಮೋಘ ದೃಶ್ಯಕ್ಕಾಗಿ ಕಾಯತೊಡಗಿದೆ ( ಯಾಕೆಂದರೆ ಜುಮ್ಮಿ ಆಡಂ, ಆಪಲ್ ತಿಂದ ಕೂಡಲೇ ಅವನಿಗೆ ಎಮೋಶನ್ ಬಂದು ಒಂದು ಮಹತ್ವದ ಘಟನೆ ಸಂಭವಿಸುತ್ತದೆ ಎಂದು ಹೇಳಿದ್ದ) . ಆದರೆ ಜುಮ್ಮಿ ಹೇಳಿದಂತೆ ಯಾವ ರೋಚಕ ಸನ್ನಿವೇಶವೂ ಬರಲೇ ಇಲ್ಲ ಮತ್ತು ಮುಖ್ಯವಾಗಿ ಆಡಂ, ಈವ್ ಚಿತ್ರದುದ್ದಕ್ಕೂ ನಮಗೆ ಬೆನ್ನು ತೋರಿಸಿಯೇ ಇರುತ್ತಿದ್ದುರಿಂದ ನಮಗೆ ಯಾವ ಮಹಾನ ಸಾಧನೆಯೂ ಆಗಲಿಲ್ಲ. ಆದರೂ ಜುಮ್ಮಿ ನಮ್ಮನ್ನೂ ಸಮಾಧಾನಿಸಿ ಒಮ್ಮೇಲೇ ಚಿತ್ರದ ಮದ್ಯೆ ಬೇರೆ ಯಾವುದೋ ಮಲಯಾಳಿ ಚಿತ್ರದ ತುಣುಕು ತೋರಿಸಿಯೇ ತೊರಿಸುತ್ತಾರೆಂದು ಹೊಸ ಆಸೆ ಹುಟ್ಟಿಸಿ, ಪೂರ್ತಿ ಚಿತ್ರ ಕಣ್ನಲ್ಲಿ ಕಣ್ಣಿಟ್ಟು ನೋಡುವಂತೆ ಮಾಡಿದರೂ ಯಾವುದೋ ಅಂತಹ ಪವಾಡ ನಡೆಯಲೇ ಇಲ್ಲಾ ಮತ್ತು ಕೊನೆಗೂ ಆಡಂ ಆಪಲ್ ತಿನ್ನಲೇ ಇಲ್ಲಾ..

ಚಿತ್ರ ಮುಗಿದ ಮೇಲೆ ನಂಗೆ ಜುಮ್ಮಿಯ ಮೇಲೆ ಅಸಾದ್ಯ ಕೋಪ ಬಂದಿತ್ತು. ಆದರೆ ಚಂದ್ರ, ತನ್ನ ಗಂಡಸ್ತನ ನಿರೂಪಿಸಿದ ಸಾರ್ಥಕತೆ ಅನುಭವಿಸುತ್ತಿದ್ದ. ಸಣ್ಯಾ ಮಾತ್ರ ಸಮಾಜ ಮತ್ತು ಬಯಾಲಾಜಿಯ ಯಾವ ಯಾವ ಪಾಠಗಳನ್ನು ಚಿತ್ರ ಕವರ್ ಮಾಡಿತ್ತು ಅಂತ ಲೆಕ್ಕ ಹಾಕುತ್ತಿದ್ದ. ಜುಮ್ಮಿ ಕೊನೆಗೂ ಬಾಯಿ ಬಿಟ್ಟು " ಲೇ ಓರಿಜಿನಲ್ಲು ಫಿಲ್ಮಲ್ಲಿ ’ಎಲ್ಲಾ’ ಇರುತ್ತದೆ, ಈ ಥೇಟರು ಬೋ...ಮಕ್ಳು ಎಲ್ಲಾ ಕಟ್ ಮಾಡಿ ಬಿಸಾಕಿರುತ್ತಾರೆ" ಅಂತ ಗೋಳಾಡಿ, ನಮ್ಮೆಲ್ಲಾ ನಿರಾಶೆಗಳಿಗೆ ಥೇಟರಿನವರನ್ನು ಹೋಣೆಯಾಗಿಸಿ ನಿರಮ್ಮಳವಾದ. ನಾನು ಜುಮ್ಮಿಯನ್ನು ನಂಬಿದ್ದೆ ತಪ್ಪಾಯ್ತು ಅಂದುಕೊಂಡು ಉಳಿದವರನೆಲ್ಲಾ ಕರೆದುಕೊಂಡು ರೋಣದ ಸಂತೆ ಅಲೆಯಲು ನಡೆದೆ.

ಕನ್ನಡದ ಹೊಸ ಬುದ್ದಿಜೀವಿ: ರವಿ ಬೆಳಗೆರೆ..

ರವಿ ಬೆಳಗೆರೆ ಬುದ್ದಿಜೀವಿಯಾಗುವ ಹ್ಯಾವಕ್ಕೆ ಬಿದ್ದಿದ್ದಾನೆ ಅಂತಾ ಇತ್ತಿಚಿನ ಅವನ ದಾಟಿಯನ್ನು ನೋಡಿದರೇ ಗೊತ್ತಾಗುತ್ತಿತ್ತು, ಆದರೆ ಈ ಮಟ್ಟದ ಬುದ್ದಿಜೀವಿಯಾಗುತ್ತಾನೆ ಅಂತಾ ಅನ್ಕೊಂಡಿರಲಿಲ್ಲ. ಇಷ್ಟೇಲ್ಲಾ ನಾನು ಯಾಕೆ ಹೇಳುತ್ತಿದ್ದೇನೆ ಅಂತಾ ನಿನ್ನೆಯ ’ವಿಜಯ ಕರ್ನಾಟಕ’ ಓದಿದವರಿಗೆ ಗೊತ್ತಾಗಿರಬಹುದು. ಭೈರಪ್ಪನವರ ಮತಾಂತರದ ಬಗೆಗಿನ ಲೇಖನಕ್ಕೆ ರವಿ ತೀರಾ ಅತಿಯಾಗಿ ಬರೆಯುತಾ ಹೊಗುತ್ತಾರೆ. ಮೊದಮೊದಲು ಭೈರಪ್ಪನವರ ವಿವೇಕವನ್ನು ಪ್ರಶ್ನಿಸುತ್ತಾ ಸಾಗುವ ಬೆಳಗೆರೆ ಕೊನೆಕೊನೆಗೆ ಶೇರು, ಐಟಿ, ಅಮೇರಿಕ ಅಂತೆಲ್ಲಾ ಬಡಬಡಿಸಿ "ಭೈರಪ್ಪ" ಮುತ್ಸದ್ದಿಯಲ್ಲ ಅಂತಾ ಶರಾ ಬರೆದುಬಿಡುತ್ತಾನೆ.. ಇಡೀ ಲೇಖನದ ತುಂಬಾ ಭೈರಪ್ಪನವರನ್ನು ಏಕವಚನದಲ್ಲೇ ಸಂಬೋದಿಸುತ್ತಾ ಸಾಗುವ ರವಿ, ಇಡಿ ಪ್ರತಿಕ್ರಿಯೆಯ ತುಂಬ "I am the final" ಎಂಬರ್ಥದಲ್ಲಿ ಬರೆಯುತ್ತಾ ಹೋಗುತ್ತಾರೆ..

ರವಿಯ ಪ್ರಕಾರ ಅಮೇರಿಕದವರು ಶ್ರೀಮಂತರು, ಹೀಗಾಗಿ ಬಯೋತ್ಪಾದನೆ ಬಗ್ಗುಬಡಿದರು.. ಆದರೆ ರವಿಗೆ ಇಡಿ ಅಮೇರಿಕಯಲ್ಲಿ ಒಬ್ಬನೇ ಒಬ್ಬ ಬುದ್ದಿಜೀವಿಯೂ ಬಯೋತ್ಪಾದಕರ ಪರ ಬೀದಿಗೀಳಿಯುವದಿಲ್ಲಾ ಮತ್ತು ಮಾನವ ಹಕ್ಕುಗಳು( ಈ ಹಕ್ಕು ಕೇವಲ ಬಯೋತ್ಪಾದರಿಗೆ ಮಾತ್ರ! ಸಾಮಾನ್ಯ ನಾಗರೀಕರಿಗೆ ಅಲ್ಲಾ ಅನ್ನುವಂತೆ) ಅಂತೆಲ್ಲಾ ಗೋಳೋ ಅಂತಾ ಅಳುತ್ತಾ ಕೂರುವದಿಲ್ಲಾ ಅನ್ನುವುದು ಕಾಣುವುದೇ ಇಲ್ಲಾ. ಅದಿರಲಿ ಅವನ ಪ್ರಕಾರ ಈಶಾನ್ಯ ಭಾರತದಲ್ಲಿ ನಡೆಯುತ್ತಿರುವದು ತುಂಬಾ ಹಳೆಯ ಚಿಕ್ಕ ವಿಷಯವಂತೆ, ಅದನ್ನು ಭೈರಪ್ಪ ಹೇಳಬಾರದಿತ್ತಂತೆ.. ಮೊದಲು ಕಾಶ್ಮೀರದಲ್ಲಿ ಶುರುವಾಗಿದ್ದು ಹೀಗೆ ಅಲ್ಲವೇ? ಚಿಕ್ಕದಿದ್ದ ವಿಷಯ ಇಡಿ ಭಾರತವನ್ನೇ ಅಲುಗಾಡಿಸುವಷ್ಟು ಬೆಳೆದಿಲ್ಲವೇ? ದಶಕಗಳ ಹಿಂದೆ ಬರೀ ಆಶ್ರಯಕ್ಕೆ ಸಂಬಂಧಪಟ್ತ ವಿಷಯವಾಗಿದ್ದ್ದ ಬಾಂಗ್ಲಾದ ನಿರಾಶ್ರಿತರ ಸಮಸ್ಯೆ ಈಗ ಇಡಿ ದೇಶಕ್ಕೆ ತಲೇನೋವಾಗಿ, ನಿರಾಶ್ರಿತರ ಸಂಖ್ಯೇಯೆ ಮೂಲನಿವಾಸಿಗಳ ಸಂಖ್ಯೇಯನ್ನು ಮೀರಿ ಆಯಾ ರಾಜ್ಯಗಳ ರಾಜಕೀಯದ ಹಣೆಬರಹವನ್ನೆ ನಿರ್ಧರು್ಸುತ್ತಿಲ್ಲವೇ? ಇದೆಲ್ಲಾ ರವಿಗೆ ತಿಳಿಯದಾ? ಸ್ವಾತಂತ್ರ ಪೂರ್ವದಲ್ಲೆ ಮಹಾತ್ಮಾ ಗಾಂಧೀ ಕೂಡಾ ಮತಾಂತರ ಆಂದರೆ ದೇಶಾಂತರ ಅಂದಿರಲಿಲ್ಲವೇ? ಅದಕ್ಕೆ ಪೂರಕವೆನ್ನುವಂತೆ ಕೆಲ ಈಶಾನ್ಯ ರಾಜ್ಯಗಳು ಪ್ರತ್ಯೇಕ ರಾಷ್ಟ್ರ ಕೇಳುತ್ತಿಲ್ಲವೇ? ಇದೆಲ್ಲಾ ಬುದ್ದಿಜೀವಿಗಳಿಗೆ ತಿಳಿಯದ ವಿಷಯವೇ?
ಚರ್ಚಿನ ಮೇಲೆ ದಾಳಿಗೆ ಇಷ್ಟು ಮನನೊಂದು ಪ್ರತಿಕ್ರಯಿಸುವ ಬುದ್ದೀಜೀವಿಗಳು ಭಟ್ಕಳದ ಮುಸ್ಲಿಂ ಬಯೋತ್ಪಾದಕರೆ ಬಗ್ಗೆ ಬಾಯಿಯೇ ತೆರೆಯುವದಿಲ್ಲವಲ್ಲ? ಭಜರಂಗಧಳ ನಿಷೇದಿಸಿ ಅಂತಾ ಹ್ಯಾವಕ್ಕೆ ಬಿದ್ದವರಂತೆ ಬಡಿದುಕೊಳ್ಲುವ ಒಬ್ಬ ಗಂಡಸಾದರೂ "ಸಿಮಿ" ನಿಷೇದಿಸಿ ಅನ್ನುತ್ತಾನಾ?. ನಸ್ಲೀಮಾ ಭಾರತದಲ್ಲಿ ರಕ್ಸ್ಕಣೆಯಿಲ್ಲಾ ಲಸ್ಕಾ ಪುಸ್ಕಾ ಅಂತೆಲ್ಲಾ ಹೇಳಿ ದೇಶ ಬಿಟ್ಟು ಹೋದಾಗ " ಈ ದೇಶದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆಯಿಲ್ಲಾ" ಅಂತಾ ಬೊಬ್ಬೆ ಇಟ್ಟಿದನ್ನು ಪುಟಗಟ್ಟಲೆ ಬರೆದು ಚಟ ತೀರಿಸಿಕೊಂಡ ಮಾದ್ಯಮಗಳು ಆಕೆ ಮತ್ತೇ ಹಳೆ ಗಂಡನ ಪಾದವೇ ಗತಿ ಅಂದುಕೊಂಡು ಭಾರತಕ್ಕೆ ಬಂದದನ್ನು ಯಾವ ಮಾದ್ಯಮವೂ ಸುದ್ದಿ ಮಾಡಲೇ ಇಲ್ಲವಲ್ಲ್ಲಾ? ಇದೇ ತಸ್ಲಿಮಾಳನ್ನು ಹೈದರಾಬಾದನಲ್ಲಿ ಆಂದ್ರದ ಮುಸ್ಲಿಂ ಶಾಸಕರು ಥಳಿಸಲು ಹೋಗಿದ್ದನ್ನು ಯಾವ ಬುದ್ದಿಜೀವಿಯೂ ಬಾಯಿ ಬಿಡುವಿದಿಲ್ಲವಲ್ಲಾ? ಯಾಕೆಂದರೆ ಥಳಿಸಲು ಹೋದವರು ಮುಸ್ಲಿಂ ಶಾಸಕರೆಂದೆ?.ಅದೇ ಬರಹಕ್ಕೆ ಪ್ರತಿಕ್ರಿಯೆಯಾಗಿ ಬರೆದವನೊಬ್ಬ ಅನಂತಮೂರ್ತಿಗಳ ಪತ್ನಿ ಮೂರ್ತಿಗಳನ್ನು ಮತಾಂತರ ಮಾಡಿದ್ದಾರಾ? ಅಂತಾ ಕೇಳುವ ಅವರಿಗೆ, ಸೋನಿಯಾ, ರಾಜೀವ ಗಾಂಧಿ ಕ್ರೈಸ್ತ ಧರ್ಮ ಸ್ವೀಕರಿಸಿದ ಮೇಲೆಯೇ ಅವರ ಮದುವೆಯಾಗಿದ್ದು ಅಂತಾ ತಿಳಿದಿಲ್ಲವಾ?.

ಎಲ್ಲರಿಗೂ ಅಭಿಪ್ರಾಯ ಸ್ವಾತಂತ್ರವಿದೆ ಅನ್ನುವುದು ನಾನು ಒಪ್ತೀನಿ, ಹಾಗೆಂದ ಮಾತ್ರಕ್ಕೆ ನಾವೂ ಬೆಂಬಲಿಸುತ್ತಿರುವುದು ಯಾರನ್ನು? ಯಾವುದನ್ನು? ಅನ್ನುವ ಕನಿಷ್ಟ ಅರಿವಾದರೂ ಇರಬೇಕಲ್ಲವೇ?. ಇದೇ ಭಾರತದಲ್ಲಿ ಜೈನರೂ ಇದ್ದಾರೆ,ಭೌದ್ದರೂ ಇದ್ದಾರೆ, ನಾವೆಂದಾದರೂ ಅವರ ಮೇಲೇ ಹಲ್ಲೆ ಮಾಡಲಾಗಲೀ ಅವರ ಪ್ರಾರ್ಥನಾ ಮಂದಿರಕ್ಕೆ ಕಲ್ಲು ಎಸೆಯುವದಾಗಲೀ ನಡೆದಿದೆಯಾ?. ಕ್ರೈಸ್ತರ ಚರ್ಚುಗಳ ಮೇಲೆ ಹಲ್ಲೆ ಆಗುತ್ತಿದೆ ಅನ್ನುವವರು ಇದನ್ನು ಯೋಚಿಸಬೇಕಲ್ಲವೇ?. ಇನ್ನು ರವಿಯ ಉಳಿದ ವಿತಂಡ ವಾದಗಳ ಬಗ್ಗೆ, ಅವನ ಇತಿಹಾಸ ಪ್ರಜ್ಞೆಯ ಬಗ್ಗೆಯಾಗಲಿ ಮಾತನಾಡಿ ಪ್ರಯೋಜವವಿಲ್ಲಾ.. ಅವನಿಗೆ ನಾನು ಯಾರನ್ನು ಬಿಡುವುದಿಲ್ಲಾ, ಎಲ್ಲರನ್ನೂ ಜಾಲಾಡಬಲ್ಲೆ ಎಂಬುದನ್ನು ತೋರಿಸಿಕೋಳ್ಲಬೇಕಿತ್ತು ಅನಿಸುತ್ತೆ, ಅದಕ್ಕೆ ಸಿಕ್ಕ ಅವಕಾಶವನ್ನು ಭರ್ಜರಿಯಾಗಿಯೇ ಬಳಸಿಕೊಂಡಿದ್ದಾನೆ. ಅವನ ಉದ್ದೇಶ ಮತಾಂತರ ಸಮರ್ಥಿಸಿಕೊಳ್ಳುವುದಾಗಿತ್ತೋ, ಬುದ್ದ್ಜಿಜೀವಿ ಅನಿಸಿಕೊಳ್ಳುವುದಾಗಿತ್ತೋ ಅಥವಾ ಸುಮ್ನೆ ಭೈರಪ್ಪನವರನ್ನು ಟೀಕಿಸಿ ಚಟ ತೀರಿಸಿಕೊಳ್ಲುವದಾಗಿತ್ತೋ ಅನ್ನುವುದು ಅವನ ಪ್ರತಿಕ್ರಿಯೆ ಓದಿದ ಎಲ್ಲರಿಗೂ ತಿಳಿಯುತ್ತೆ.. ಕೆಲವೇ ಕೆಲವು ವರ್ಷಗಳ ಹಿಂದಿನ ಹಾಯ್ ನ ಸಂಪಾದಕೀಯ ಓದಿದರೆ ತಿಳಿಯುತ್ತೆ, ಇತ್ತಿಚಿನ ರವಿಯ ಚಿತ್ತ ಎತ್ತ ಇದೆ ಅನ್ನುವುದು..
ಇವೆಲ್ಲ ರವಿಗೆ ಗೊತ್ತಿಲ್ಲವಾ ಅಂತ ಅನುಮಾನ! ಮಲಗಿದವರನ್ನು ಎಬ್ಬಿಸಬಹುದು, ಆದರೆ ಮಲಗಿದಂತೆ ನಟಿಸುವವರನ್ನು ಎಬ್ಬಿಸೋದು ಅಸಾದ್ಯ..

ಒಟ್ಟಿನಲ್ಲಿ ಸದ್ಯದಲ್ಲಿಯೇ ಕನ್ನಡಕ್ಕೆ ಇನ್ನೊಂದು "ಜ್ಞಾನಪೀಠ" ನಿರಿಕ್ಷಿಸಬಹುದು, ಕನಿಷ್ಟ ಯಾವುದಾದರೂ "ಸೌಹಾರ್ದ"ದ ಹೆಸರಿನ ಅಯೋಗದ ಅದ್ಯಕ್ಷಗಿರಿಯಾದರೂ ಕನ್ನಡಕ್ಕೆ ಒಲಿದು ಬಂದೀತು..

ಗೆಳೆಯನೊಬ್ಬನ ಕವನಗಳು...

ಅಮ್ಮನ ಬುತ್ತಿ ಬೇರಿನಲ್ಲಿ...

ಬೇರಿನಲ್ಲಿ ಬುತ್ತಿ ಕಟ್ಟಿಟ್ಟಿದ್ದಳು ಅಮ್ಮ
ಮರಕೆಲ್ಲಿ ಗೊತ್ತು?
ಎಲ್ಲಿಂದಲೋ ಬಂದ ರಿವಿಕಿರಣಕ್ಕೆ
ಮುಖ ಮಾಡಿತ್ತು!

ಮೈ ಎಲ್ಲ ಮನಮಾಡಿ ಹಸಿರುಗನಸುಗಳ ಹೊತ್ತು
ಮಂದ ಮಾರುತಕ್ಕೆ ಮೈಯ್ಯ ಮರೆತಿತ್ತು!
ಬಳುಕುವ ಬಳ್ಳಿಗೆ ಸೋತು ಅಪ್ಪಿ ಬೆಳೆದಿತ್ತು!
ಬಣ್ನ ಬಣ್ನಗಳ ಹಕ್ಕಿಗಳ ಸಂಸಾರ ಮೈ ಎಲ್ಲ ಹೊತ್ತು
ತಾನೋಬ್ಬನೆ ಆಕಾಶಕ್ಕೇಣಿಯಾಗುವನೆಂದು
ಉಬ್ಬಿ ನಿಂತಿತ್ತು!

ಆಗಸವೂ ಸಿಗದೆ ಅಳುಕಿ ತಡಕಾಡಿ
ಬೇರೂ ಸಿಗದೇ ಬುತ್ತಿಯೂ ಸಿಗದೆ ಕಂಗಾಲಾಗಿತ್ತು!
ಮತ್ತೆ ಬೇರನ್ನರಸಿ ಕೆಳಗಿಳಿದಿತ್ತು!
ತಾನು ತಂದಿದ್ದ ಬುತ್ತಿ ಗೆದ್ದಲ ಗೂಡಿನಲ್ಲಿ
ಜೀರ್ಣವಾಗಿತ್ತು

ಬೇರುಗಳ ಸಂಧಿಯಲ್ಲಿ ಎಲ್ಲೋ ಹಣ್ಣಾಗಿದ್ದ ಈಗ
ಮಣ್ಣಾಗಿದ್ದ ಅದರಮ್ಮ ಹೇಳಿದ್ದು
ಆತ್ಮರತಿಗೆ ಮಾತ್ರ ಕೇಳುವಂತಿತ್ತು;
ಮಗುವೇ ನೀನಿನ್ನೂ ಬೆಳೆಯಬೇಕಿತ್ತು..

ಹಾಗೇ ಬಿಕ್ಕಿದ್ದು

ಒಮ್ಮೆ ಮಾತನಾಡಿಬಿಡು
ದಿನಾ ಮೊಬೈಲ್
ಫೋನ್ ಸ್ಪೀಕರಿಗೇ
ಕಣ್ಣೀರಿನ ಅಭಿಷೇಕದಿಂದ
ಕಲೆಯಾಗಿದೆ
ಕಿವಿಯನ್ನೇ ಮೊಗವಾಗಿಸಿ
ಅತ್ತುಕರೆದಾಗಿದೆ
ಹಾಗೇ ಎದ್ದು ಬಂದು ಬಿಡು
ಬೆಳದಿಂಗಳ ರಾತ್ರಿಯಲ್ಲಿ
ಕಣ್ಣಿಗೆ ಕಣ್ಣು ನೆಡು...


ಕಕ್ಕುಲತೆ, ಒಲವು
ಕಣ್ಣಲ್ಲಿ ಅದೆಂತಹ ಕಾವು
ಹೇಳುವ ಮಾತಿಗೆ
ಇಷ್ಟೇ ಜಾಡು
ಅಳತೆಯಿಲ್ಲದಷ್ಟು ಎದೆಯಲ್ಲಿರಿಸಿ
ಭ್ರಮಣ ಸಾಕುಮಾಡಿನ್ನು
ನಿಜಪಯಣ
ಬಂದುಬಿಡು ಹಾಗೇ ಕಣ್ಣಲ್ಲೊಮ್ಮೆ ಹೀರಿಬಿಡು!

ಮತ್ತೊಂದು ಮಳೆ ಕವನ..

ಥೋ! ಜೋರು ಮಳೆ ಸಡನ್ನಾಗಿ
ಶುರುವಾಯಿತು ಅಂತ,
ನಿಲ್ಲಿಸಿ ಬೈಕ,
ನಾನೂ ನಿಂತೆ ಅಂಗಡಿಯೊಂದರ ಪಕ್ಕ
ಸಿಡಿಮಿಡಿಗುಟ್ಟುತ್ತ,
ಅನಿರೀಕ್ಷಿತದ ಮೇಲೆ.

ಚುರುಗುಟ್ಟುವ ಹೊಟ್ಟೆ
ಅರೆಬರೆ ಒದ್ದೆ,
ಥೂ! ಅಂತೊಮ್ಮೆ ಸುರಿವ ಮಳೆಗೇ ಕ್ಯಾಕರಿಸಿ
ಹಳಿದುಕೊಳ್ಳುತ್ತ ನನ್ನ ಗ್ರಹಚಾರ
ನೋಡುತ್ತ ನಿಂತೆ ಖಾಲಿ ರಸ್ತೆ
ವಿರಳ ಸಂಚಾರ

ಪಕ್ಕದಲಿ ಅಜ್ಜಿ, ಮೊಮ್ಮಗ
ಇಬ್ಬರೂ ನಿರಾಳ
ಹುಡುಗ ನೀರ ಹರಿವಿಗೆ
ಮೆಲ್ಲನೆ,ಅಜ್ಜಿಗೆ ಕಾಣದ ಹಾಗೆ ಕಾಲದ್ದಿ
ರೋಮಾಂಚನಗೊಳ್ಳುತ್ತ
ಅಜ್ಜಿ, ಕಂಡರೂ ಕಾಣದ ಹಾಗೆ ಮಾಡುತ್ತ..

ಆ ಜಡಿಧಾರೆಯಲ್ಲೇ ರಸ್ತೆಯಲಿ
ಹೈಸ್ಕೂಲು ಹುಡುಗಿ, ಬಟ್ಟಲು ಗಣ್ಣಿನವಳು
ಚೂಡಿದಾರದ ವೇಲು ತಲೆಗೆ ಹೊದ್ದು
ಮಳೆಯ ನೋಡುತ್ತ
ಯಾವುದೋ ಹಾಡು ಗುನುಗುತ್ತ
ಪ್ರಸನ್ನವದನೆ, ಮಂದಗಮನೆ.

ರಸ್ತೆಯ ಆ ಬದಿಗೆ
ಗಿರಾಕಿಗಳಿಲ್ಲದ ಕಾಂಡಿಮೆಂಟ್ಸಿನವನು
ತನ್ನ ಕೈಯಾರೆ ಮಾಡಿದ
ಚಹವ ತಾನೆ ಹೀರುತ್ತ - ಹೊತ್ತು
ಬ್ರಹ್ಮಾನಂದ,
ರೇಡಿಯೋ ಕೇಳುತ್ತ ಮಳೆಗೆ ಮುಖ ಮಾಡಿದ್ದ.

ನನಗೆ ಯಾಕೋ ಅಲ್ಲಿ ನಿಲ್ಲಲೇ ಆಗದೆ
ಸಟಕ್ಕನೆ
ಬೈಕಿನೆಡೆಗೋಡಿ, ಕೀ ತಿರುವಿ
ಹಾಗೇ ನೆನೆಯುತ್ತಲೇ ಮನೆಗೆ
ಬರುವಷ್ಟರಲ್ಲಿ
ಮಳೆ ನಿಂತುಹೋಗಿತ್ತು.

ಹಳೆಯ ಧಾರಾವಾಹಿಗಳ ನೆನೆದು..

ನಮ್ಮ ಮನೆಗೆ ಟಿ.ವಿ ಬಂದಿದ್ದು, ನಾನು ಮೂರನೇ ಕ್ಲಾಸಲ್ಲಿದ್ದಾಗಲೇ. ಅ ಮಟ್ಟಿಗೆ ನಾನು ಪುಣ್ಯವಂತ ಎಂತಲೇ ಅನ್ನಬಹುದು. ಏಕೆಂದರೆ ಅ ಕಾಲಕ್ಕೆ- ನನ್ನ ಹೆಚ್ಚಿನ ಕ್ಲಾಸ್ ಮೇಟುಗಳ ಮನೆಗಳಲ್ಲಿ ಟಿ.ವಿ. ಇರಲಿಲ್ಲ, ಮತ್ತು ನಾನು ದಿನಾ ಬಂದು ಹೇಳುತ್ತಿದ್ದ ದೂರದರ್ಶನದ ಕಥೆಗಳನ್ನು ನನ್ನ ಮಿತ್ರರು ಬಾಯಿ ಬಿಟ್ಟುಕೊಂಡು ಕೇಳುತ್ತಿದ್ದರು, ಸತ್ಯ ಹೇಳಬೇಕೆಂದರೆ ಆ ಕಥೆಗಳು- ನಾನು ಬಾಯಿ ಬಿಟ್ಟುಕೊಂಡು ಟೀವಿಯನ್ನ ಏನೂ ಅರ್ಥವಾಗದೇ ಸುಮ್ಮನೇ ದಿಟ್ಟಿಸುತ್ತಿದ್ದಾಗ ಪಾಪ ಅನ್ನಿಸಿ, ಅಥವಾ ಪದೇ ಪದೇ ಪೀಡಿಸುತ್ತಿದ್ದಾಗ ನನ್ನಪ್ಪ ಹೇಳಿದವೇ ಅಗಿದ್ದವು. ನನಗೆಲ್ಲಿಂದ ಹಿಂದಿ ಅರ್ಥವಾಗಬೇಕು?ಕೆಲಬಾರಿ ಟಿ.ವಿಯಲ್ಲಿ ಓಡಾಡುತ್ತಿದ್ದ ಚಿತ್ರಗಳಿಗೂ, ಅಪ್ಪ ಹೇಳಿದ್ದಕ್ಕೂ ಸಂಬಂಧ ಇಲ್ಲದಂತೆ ಅನ್ನಿಸಿದರೂ, ಸುಮ್ಮನೇ ತಲೆಯಾಡಿಸುತ್ತಿದ್ದೆ, ಮಾರನೇ ದಿನ, ನಾನು ಹೀರೋ ಅಗಬೇಕಾದ್ದರಿಂದ, ಅಪ್ಪ ಹೇಳಿದ್ದನ್ನು ನೆನಪಿಟ್ಟುಕೊಂಡು ಬಂದು, ಅದನ್ನೇ ಸ್ನೇಹಿತರೆದುರು ವದರುತ್ತಿದ್ದೆ. ಅವರುಗಳಿಗೆ ಅದೆಷ್ಟು ಅರ್ಥವಾಗುತ್ತಿತ್ತೋ ಬಿಡುತ್ತಿತ್ತೋ, ದೇವರಿಗೇ ಗೊತ್ತು. ಏಕೆಂದರೆ- ಇವತ್ತೊಂದರ ಕಥೆಯಾದರೆ, ನಾಳೆ ಹೇಳುತ್ತಿದ್ದು ಇನ್ನೊಂದೇ ಅಗಿರುತ್ತಿತ್ತು. ಅದರೂ ಮಧ್ಯಾಹ್ನ ಊಟದ ಬುತ್ತಿ ಬಿಚ್ಚಿದಾಗ, ಭಕ್ತಿಯಿಂದ ಒಂದಿಷ್ಟು ಜನ ನನ್ನ ಸುತ್ತ ಸೇರಿರುತ್ತಿದ್ದು ಇನ್ನೂ ನೆನಪಿದೆ ನನಗೆ.ಎರಡು ಮೂರು ವರುಷ ಕಳೆದ ಮೇಲೆ ನಾನು ಕಥೆ ಹೇಳುವ ಕಾಲ ಮುಗಿದಿತ್ತು. ನಾವೊಂದಿಷ್ಟು ಜನ ಸೇರಿ ಹಿಂದಿನ ದಿನ ನೋಡಿದ ಸೀರಿಯಲ್ ಗಳ ಬಗ್ಗೆ ಚರ್ಚೆ ಮಾಡುವಷ್ಟು ಪಾಂಡಿತ್ಯ ಬೆಳೆದಿತ್ತು - ಕಾರಣ- ದೂರದರ್ಶದಲ್ಲಿ ಕನ್ನಡ ಕಾರ್ಯಕ್ರಮಗಳು ಬರುತ್ತಿದ್ದವು. ನಾನಂತೂ ಸರಿಯಾಗಿ ಅರ್ಥವಾಗದ ಹಿಂದಿ ಕಾರ್ಯಕ್ರಮಗಳನ್ನೇ ನೋಡುತ್ತಿದ್ದವನು ಇನ್ನು ಕನ್ನಡ ಬಿಟ್ಟೇನೆಯೇ?ನನ್ನಂತಹ ಅದೆಷ್ಟೋ ಹುಡುಗರಿಗೆ ಮತ್ತು ಅಪ್ಪ ಅಮ್ಮಂದಿರಿಗೆ ಕನ್ನಡ ಧಾರಾವಾಹಿಗಳ ಹುಚ್ಚು ಹತ್ತಿಸಿದ ಕೀರ್ತಿ 'ಗುಡ್ಡದ ಭೂತ' ಧಾರಾವಾಹಿಗೆ ಸಲ್ಲಬೇಕು. ಪ್ರತಿ ಸೋಮವಾರ ಇರಬೇಕು-ಸರಿಯಾಗಿ ನೆನಪಿಲ್ಲ- ಸಂಜೆ 7.30ಕ್ಕೆ ಸರಿಯಾಗಿ ದೂರದರ್ಶನದೆದುರು ಎಲ್ಲರೂ ಸ್ಥಾಪಿತ. ಜಾನ್ಸನ್ ಬೇಬೀ ಪೌಡರಿನದೋ- ಸೋಪಿನದೋ ಜಾಹೀರಾತು ಮುಗಿದ ಕೂಡಲೇ 'ಡೆನ್ನಾನ ಡೆನ್ನಾನ...' ಅನ್ನುವ ಟೈಟಲ್ ಸಾಂಗು. ಕೇಳುತ್ತಿದ್ದ ಹಾಗೇ- ಮೈ ರೋಮಾಂಚನ. ಭೂತದ ಕಥೆ ಬೇರೆ. ಗುಡ್ಡದ ಭೂತ ಎಂದು ಯಾರಾದರೂ ಕೂಡಲೇ ತೆಂಗಿನ ಗರಿ ಉದುರುವುದು- ಹೊರಗೆ ಒಣಗಲು ಹಾಕಿದ ಬಟ್ಟೆಗೆ ಥಟ್ಟಂತ ಬೆಂಕಿ ಹತ್ತಿಕೊಳ್ಳುವುದು- ಏನು ಕೇಳುತ್ತೀರಿ.ಪ್ರಕಾಶ್ ರೈ ಅಭಿನಯದ ಮೊದಲ ಸೀರಿಯಲ್ ಅದು. ರಾಮಚಂದ್ರ ಅನ್ನುವ ರೋಲ್ ಮಾಡಿದ ಸಣಕಲು ಪ್ರಕಾಶ ರೈ ಇನ್ನೂ ನೆನಪಿದ್ದಾನೆ ನನಗೆ. ಈಗಿನ ಹಾಗೆ ನೂರಾರು ಎಪಿಸೋಡುಗಳಲ್ಲ- ಕೇವಲ 13 ಸಂಚಿಕೆಗಳಿಗೇ ಮುಗಿದ ಧಾರಾವಾಹಿ ಗುಡ್ಡದ ಭೂತ. ಅದು ಪ್ರಸಾರವಾಗುತ್ತಿದ್ದಷ್ಟೂ ಕಾಲ, ಯಾವತ್ತೂ ಅ ಹೊತ್ತಿಗೆ ಕರೆಂಟು ಸೈತ ಹೋಗಿರಲಿಲ್ಲ! ಮೊನ್ನೆ ಮೊನ್ನೆ ಏನನ್ನೋ ಹುಡುಕುತ್ತಿದ್ದವನಿಗೆ ಆ ಟೈಟಲ್ ಟ್ರಾಕ್ ನ ಎಂಪಿತ್ರೀ ಸಿಕ್ಕಿದಾಗ ಅದ ಖುಷಿಯಂತೂ ಹೇಳತೀರದು.ನಮ್ಮ ಮನೆಯಲ್ಲಿ ಧಾರಾವಾಹಿಗಳನ್ನು ಅಪ್ಪ ಅಮ್ಮನೂ ಕೂತು ನೋಡುತ್ತಿದ್ದುದರಿಂದ- ನಂಗೆ, ತಂಗಿಗೆ ಯಾವ ತೊಂದರೆಯೂ ಇಲ್ಲದೇ ಅವರ ಜೊತೆ ಕೂತು ಇವುಗಳನ್ನು ನೋಡುವ ಅವಕಾಶ ಲಭ್ಯವಿತ್ತು. ಅಷ್ಟಕ್ಕೂ ದಿನಕ್ಕೆ ನೋಡುತ್ತಿದ್ದದು ಒಂದೋ- ಎರಡೋ ಸೀರಿಯಲ್ಲುಗಳನ್ನು ಮಾತ್ರ. ಎಲ್ಲಾದರೂ ಪರೀಕ್ಷೆಗಳಿದ್ದ ಸಮಯ ಓದಿಕೋ ಹೋಗಿ ಅಂದರೂ, ಅದು ಮೆತ್ತನೆ ಗದರಿಕೆಯಷ್ಟೇ ಅಗಿದ್ದು, ಧಾರಾವಾಹಿಗಳಿಗೆ ಕತ್ತರಿ ಬೀಳುತ್ತಿರಲಿಲ್ಲ.ಎಂಥೆಂಥ ಸೊಗಸಾದ ಸೀರಿಯಲ್ ಗಳು ಅಗ. ನಾಗಾಭರಣರ ತಿರುಗುಬಾಣ, ಥ್ರಿಲ್ಲರ್ ಅದರೆ ರಮೇಶ್ ಭಟ್ ಅಭಿನಯದ ಕ್ರೇಝಿ ಕರ್ನಲ್ ಕಾಮಿಡಿ ಧಾರಾವಾಹಿ. ಬಿ.ವಿ.ರಾಜಾರಾಂ ಅಭಿನಯದ ಅಜಿತನ ಸಾಹಸಗಳು ಪತ್ತೇದಾರಿ. ಆಜಿತನ ಸಾಹಸಗಳನ್ನು ನೋಡಿ ನೋಡೀ ಅವರ ಫ್ಯಾನ್ ಅಗಿ ಹೋಗಿದ್ದೆ. ಎಷ್ಟರ ಮಟ್ಟಿಗೆಂದರೆ, ಅದೆಷ್ಟೋ ವರುಷಗಳ ನಂತರ, ಮೊದಲ ಬಾರಿಗೆ ಬೆಂಗಳೂರಿಗೆ ಬಂದಾಗ ರಾಜಾರಾಂ ಸರ್ ಅನಂದ ರಾವ್ ಸರ್ಕಲ್ ಸಮೀಪದ ಸಿಗ್ನಲ್ ನಲ್ಲಿ ಸ್ಕೂಟರ್ ನಿಲ್ಲಿಸಿಕೊಂಡಿದ್ದು ನೋಡಿ ಅಜಿತ- ಅವನ ಪತ್ತೇದಾರಿ ಬುದ್ಧಿ- ಕಣ್ಣೆದುರಿರುವ ಅತ್ಯಂತ ಸಾಮಾನ್ಯ ರಾಜಾರಾಂ - ಸಂಪೂರ್ಣ ಅಯೋಮಯವಾಗಿ ಹೋಗಿತ್ತು!ದಿನವೂ ಧಾರಾವಾಹಿಗಳು ಪ್ರಸಾರವಾಗುವ ಕಾಲ ಬೇರೆ ಇರಲಿಲ್ಲ ಅವಾಗ, ಇವತ್ತು ಒಂದು ಧಾರಾವಾಹಿ ಬಂದು ಹೋದರೆ, ಮತ್ತೊಂದು ವಾರ ಕಾಯಬೇಕು ಅದಕ್ಕಾಗಿಯೇ. ಪ್ರತಿ ದಿನ ಕೂಡ ಬೇರೆ ಬೇರೆ ಧಾರಾವಾಹಿಗಳು. ಪ್ರತಿ ಭಾನುವಾರ ಬೆಳಗ್ಗೆ ಸಬೀನಾ ಅಂತೊಂದು ಫ್ಯಾಂಟಸಿ ಸೀರಿಯಲ್ ಬರುತ್ತಿತ್ತು. ಅದರ ಟೈಟಲ್ ಟ್ರ್ಯಾಕ್ ಗೇ ನಾನು- ತಂಗಿ ಮರುಳಾಗಿದ್ದೆವು. ಡಿಸ್ಕೋರಾಗ ಅದಿತಾಳ, ಸಾಧನೆ, ಚಕ್ರ, ಚಿಗುರು, ಬೆಳದಿಂಗಳಾಗಿ ಬಾ ಇವೆಲ್ಲ ಚಂದದ ಶೀರ್ಷಿಕೆ ಗೀತೆ- ಜೊತೆಗೆ ಕಥೆ ಹೊಂದಿದ ಧಾರಾವಾಹಿಗಳೇ.ಮೋಡಕೆ ಮೋಡ ಬೆರೆತರೆ ನೋಡು ತುಂತುರು ಹೂ ಹಾಡು ಅನ್ನುವ ಚಕ್ರ ಧಾರಾವಾಹಿಯ ಹಾಡು ತೀರಾ ನಿನ್ನೆ ಮೊನ್ನೆ ಕೇಳಿದ್ದೇನೋ ಅನ್ನುವ ತರ ತಲೆಯೊಳಗೆ ಕೂತುಬಿಟ್ಟಿದೆ. ಅದೇ ತರ 'ಅಲ್ಲೊಂದು ಚಿಗುರು, ಇಲ್ಲೊಂದು ಚಿಗುರು', - ಚಿಗುರು ಧಾರಾವಾಹಿಯದು, ಕಾಲ ಮುಂದೆ, ನಾವು ಹಿಂದೆ ಜೂಟಾಟ ಜೂಟಾಟ ಅನ್ನೋ ಸಾಧನೆಯ ಹಾಡು.. ಎಲ್ಲಕ್ಕೂ ಮಿಗಿಲಾಗಿ, ಧಾರಾವಾಹಿ ಪ್ರಪಂಚದ ಅನೂಹ್ಯ ಸಾಧ್ಯತೆಗಳನ್ನು ತೆರೆದಿಟ್ಟ, ಮಾಯಾಮೃಗದ ಮ್ಯಾಜಿಕಲ್ ಹಾಡು, ಮಾಯಾಮೃಗ ಮಾಯಾಮೃಗ ಮಾಯಾಮೃಗವೆಲ್ಲಿ...ಮಾಯಾಮೃಗ ಪ್ರಸಾರವಾಗಬೇಕಿದ್ದರೆ ನಾನು ಹತ್ತನೇ ತರಗತಿ. ಸಂಜೆ ಕ್ಲಾಸು ಬಿಟ್ಟು ಅರ್ಧ ಗಂಟೆಗೆ ಸರಿಯಾಗಿ 4 ಕಿಲೋಮೀಟರು ದೂರದ ಮನೆಯಲ್ಲಿರಬೇಕಿತ್ತು. ಎದ್ದೂ ಬಿದ್ದೂ ಓಡಿಬರುವಷ್ಟರಲ್ಲಿ- ಮಾಯಾಮೃಗದ ಹಾಡು ಕೇಳುತ್ತಿತ್ತು. ತೀರಾ ನಮ್ಮದೇ ಮನೆಯದೇ ಕಥೆ ಇದು ಎಂದು ನಂಬಿಸಿಯೇ ಬಿಟ್ಟಿದ್ದ ಧಾರಾವಾಹಿ ಅದು. ಎಲ್ಲರಿಗೂ ಈ ಧಾರಾವಾಹಿ ಬಗ್ಗೆ ಖಂಡಿತಾ ತಿಳಿದೇ ಇರುತ್ತದೆ ಎನ್ನುವ ವಿಶ್ವಾಸವಿರುವ ನಾನು ಈ ಬಗ್ಗೆ ಏನೂ ಹೆಚ್ಚಿಗೆ ಹೇಳುವುದಿಲ್ಲ. ವಾರಪತ್ರಿಕೆಯೊಂದು ವಾರಾ ವಾರಾ ಮಾಯಾಮೃಗದ ಕಥೆ ಮುದ್ರಿಸಲೂ ಅರಂಭಿಸಿತ್ತು ಅವಾಗ.ಮನ್ವಂತರ ಧಾರಾವಾಹಿಯೊಂದಿಗೆ ನನ್ನ ಸೀರಿಯಲ್ ಕ್ರೇಝ್ ಮುಗಿಯಿತು. ಅಮೇಲೆ ಇವತ್ತಿನವರೆಗೆ ಯಾವ ಧಾರಾವಾಹಿಯನ್ನೂ ಫಾಲೋ ಮಾಡಿಲ್ಲ, ಗರ್ವ ಮತ್ತು ಗೃಹಭಂಗ ಹೊರತು ಪಡಿಸಿ. ಮುಕ್ತ ಪ್ರಸಾರವಾಗುವಾಗ ಬೆಂಗಳೂರಿಗೆ ಬಂದಿದ್ದೆ, ನೋಡಲಾಗಲಿಲ್ಲ. ಅಲ್ಲದೇ ಅಷ್ಟು ಹೊತ್ತಿಗೆ ಅಷ್ಟೂ ಚಾನಲ್ ಗಳ ಪ್ರೈಮ್ ಟೈಮ್ ಅತ್ತೆ ಸೊಸೆಯರಿಗೇ ಮೀಸಲಾಗಿಹೋಗಿತ್ತು. ಒಮ್ಮೆ ನೋಡಿದ ಧಾರಾವಾಹಿಯನ್ನ ಮತ್ತೆ ನೋಡಬೇಕು ಎಂದು ಅನ್ನಿಸಲೇ ಇಲ್ಲ. ಧಾರಾವಾಹಿಗಳ ಸುವರ್ಣಯುಗ, ಗುಣಮಟ್ಟದ ದೃಷ್ಟಿಯಿಂದ ನೋಡಿದರೆ ಐದಾರು ವರ್ಷಗಳ ಕೆಳಗೇ ಮುಗಿದು ಹೋಗಿದೆ ಎಂದನ್ನಿಸುತ್ತದೆ.ಕೆಲಬಾರಿ ಸಂಜೆ ಹೊತ್ತಿಗೆ ಈ ಬೆಂಗಳೂರಿನ, ನಮ್ಮ ಮನೆಯ ಬೀದಿಯಲ್ಲಿ ನಡೆಯುವಾಗ ಅನ್ನಿಸುವುದುಂಟು- ಯಾವುದರೂ ಮುಚ್ಚಿದ ಬಾಗಿಲಿನ, ಅದರೆ ತೆರೆದಿರುವ ಮನೆ ಕಿಟಕಿಯೊಳಗಿಂದ, ' ಸೆಳೆಯುತ್ತಿದೆ ಕಣ್ಣಂಚೂ, ಗಿರಿವಜ್ರದ ಹಾಗೇ' ಅನ್ನುವ ಮಾಯಾಮೃಗದ ಗೀತೆ ಮತ್ತೆ ಕೇಳಬಾರದೇ. S. ನಾನು ಓಡಿ ಹೋಗಿ, ಟಿ.ವಿ ಹಾಕಿ....ಇದು ದಟ್ಸ್ ಕನ್ನಡಕ್ಕೆ ಬರೆದ ಅಂಕಣ. ಹಲವರು ಮೇಲ್ ಮಾಡಿ ಗುಡ್ಡದ ಭೂತ ಮತ್ತು ಇತರ ಧಾರಾವಾಹಿಗಳ ಎಂಪಿತ್ರೀ ಕೇಳಿದರು. ಈ ಲಿಂಕ್ ಲಿ ಕೆಲ ಹಳೆಯ ಧಾರಾವಾಹಿಗಳ ಹಾಡುಗಳು ಲಭ್ಯವಿದೆ