ಸ್ವಾಗತ

Namaste...!!!ಪ್ರಿಯ ಗೆಳಯ/ತಿಯರೇ ಬ್ಲಾಗ್ ನಲ್ಲಿ ವಿಹರಿಸಿದ ನಂತರ ತಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡುವುದುರ ಮೂಲಕ ತಿಳಿಸಿ. ಸಹಾಯ ಮಾಡಿ. ನಿಮ್ಮ ಸ್ನೇಹಿತ.>

Saturday, December 13, 2008

ಮತ್ತೊಂದು ಮಳೆ ಕವನ..

ಥೋ! ಜೋರು ಮಳೆ ಸಡನ್ನಾಗಿ
ಶುರುವಾಯಿತು ಅಂತ,
ನಿಲ್ಲಿಸಿ ಬೈಕ,
ನಾನೂ ನಿಂತೆ ಅಂಗಡಿಯೊಂದರ ಪಕ್ಕ
ಸಿಡಿಮಿಡಿಗುಟ್ಟುತ್ತ,
ಅನಿರೀಕ್ಷಿತದ ಮೇಲೆ.

ಚುರುಗುಟ್ಟುವ ಹೊಟ್ಟೆ
ಅರೆಬರೆ ಒದ್ದೆ,
ಥೂ! ಅಂತೊಮ್ಮೆ ಸುರಿವ ಮಳೆಗೇ ಕ್ಯಾಕರಿಸಿ
ಹಳಿದುಕೊಳ್ಳುತ್ತ ನನ್ನ ಗ್ರಹಚಾರ
ನೋಡುತ್ತ ನಿಂತೆ ಖಾಲಿ ರಸ್ತೆ
ವಿರಳ ಸಂಚಾರ

ಪಕ್ಕದಲಿ ಅಜ್ಜಿ, ಮೊಮ್ಮಗ
ಇಬ್ಬರೂ ನಿರಾಳ
ಹುಡುಗ ನೀರ ಹರಿವಿಗೆ
ಮೆಲ್ಲನೆ,ಅಜ್ಜಿಗೆ ಕಾಣದ ಹಾಗೆ ಕಾಲದ್ದಿ
ರೋಮಾಂಚನಗೊಳ್ಳುತ್ತ
ಅಜ್ಜಿ, ಕಂಡರೂ ಕಾಣದ ಹಾಗೆ ಮಾಡುತ್ತ..

ಆ ಜಡಿಧಾರೆಯಲ್ಲೇ ರಸ್ತೆಯಲಿ
ಹೈಸ್ಕೂಲು ಹುಡುಗಿ, ಬಟ್ಟಲು ಗಣ್ಣಿನವಳು
ಚೂಡಿದಾರದ ವೇಲು ತಲೆಗೆ ಹೊದ್ದು
ಮಳೆಯ ನೋಡುತ್ತ
ಯಾವುದೋ ಹಾಡು ಗುನುಗುತ್ತ
ಪ್ರಸನ್ನವದನೆ, ಮಂದಗಮನೆ.

ರಸ್ತೆಯ ಆ ಬದಿಗೆ
ಗಿರಾಕಿಗಳಿಲ್ಲದ ಕಾಂಡಿಮೆಂಟ್ಸಿನವನು
ತನ್ನ ಕೈಯಾರೆ ಮಾಡಿದ
ಚಹವ ತಾನೆ ಹೀರುತ್ತ - ಹೊತ್ತು
ಬ್ರಹ್ಮಾನಂದ,
ರೇಡಿಯೋ ಕೇಳುತ್ತ ಮಳೆಗೆ ಮುಖ ಮಾಡಿದ್ದ.

ನನಗೆ ಯಾಕೋ ಅಲ್ಲಿ ನಿಲ್ಲಲೇ ಆಗದೆ
ಸಟಕ್ಕನೆ
ಬೈಕಿನೆಡೆಗೋಡಿ, ಕೀ ತಿರುವಿ
ಹಾಗೇ ನೆನೆಯುತ್ತಲೇ ಮನೆಗೆ
ಬರುವಷ್ಟರಲ್ಲಿ
ಮಳೆ ನಿಂತುಹೋಗಿತ್ತು.

No comments:

Post a Comment