ಒಂದು ಸಂಜೆ ಅಡುಗೆ ಮನೆಯಲ್ಲಿ
ಪಾತ್ರೆಗಳ ಸಮಾವೇಶ ಜರುಗಿತ್ತು
ಅವರಲ್ಲಿ ರಾಜ ಯಾರಾಗಬೇಕೆಂದು
ಚರ್ಚೆ ಬಹಳ ಜೋರಾಗಿತ್ತು
ಮೊದಲು ಎದ್ದಿತು ಹಳೆಯ ಹಂಡೆ
ಕೇಳಿರಿ, ಸೀನಿಯಾರಿಟಿ ಪ್ರಕಾರ ನಾ ಮುಂದೆ

ನೀವೆಲ್ಲಾ ಹಿಂದೆ
ಮಧ್ಯೆ ಬಾಯಿ ಹಾಕಿತು ಬಾಣಲೆ
ಕರಿಹಿಡಿದ ತಳದ ಡುಬ್ಬಣ್ಣ ನೀನು
ಬಾಯಿ ಮುಚ್ಕೊಂಡು ಕುಂತ್ಕಳಲೇ
ರಾಜನಾಗಲು ನಾನೇ ಲಾಯಕ್ಕು
ಹುರಿಯಲು ಕರಿಯಲು ನಾನೇ ಬೇಕು
ಇದನ್ನು ಸಹಿಸದೆ ಎದ್ದು ನಿಂತಿತು ಕುಕ್ಕರ್
ಕುಂತ್ಕಳಲೇ ಬಾಣಲೆ ಈಗ ನಾನೇ ಸೀನಿಯರ್
ಹುರಿದೂ ಹುರಿದೂ ಕಪ್ಪಾಗಿದೆ ಮುಖ
ತಕ್ಷಣದ ಅಡುಗೆಗೆ ನಾನೇ ಪ್ರಮುಖ
ಕುಕ್ಕರನ್ನು ಕುಕ್ಕರುಬಡಿಸಿ ನಿಂತಿತು ಇಡ್ಲಿಪಾತ್ರೆ
ಬೇರೇನು ಗೊತ್ತಿಲ್ಲ ನಿಮ್ಗೆ ಸೀಟಿ ಹೊಡೆಯೋದು ಬಿಟ್ರೆ
ಬೆಳಿಗ್ಗೆ ಬಿಸಿಬಿಸಿ ಇಡ್ಲಿ ನಾ ನೀಡುವೆ
ಎಲ್ಲರ ಮನವ ನಾ ಗೆದ್ದಿರುವೆ
ಇದಕ್ಕೆ ಉತ್ತರ ನೀಡಿತು ಸೌಟು
ನಿಮಗೆಲ್ಲಾ ತಿರುಗಿದೆ ತಲೆ ನನಗೆ ಡೌಟು
ರುಚಿ ನೋಡಲು ನಾನೇ ಬೇಕು
ರಾಜನಾಗಲು ಇದಕ್ಕಿಂತ ಹೆಚ್ಚೇನು ಬೇಕು
ಸೌಟಿನ ತಲೆ ಮೊಟಕಿ ಎದ್ದುತ್ತು ಕೈಪಾತ್ರೆ
ನಾನಿದ್ದೇನೆ, ಸರಿಯಲಿ ಹಿಂದೆ ನಿಮ್ಮ ಜಾತ್ರೆ
ಹಾಲಿನಿಂದ ಹಿಡಿದು ಪಾಯಸದ ವರೆಗೆ
ನಾನೇ ಬೇಕು, ನಾನು ಯೂನಿವರ್ಸಲ್ ಪಾತ್ರೆ
ಕೈಪಾತ್ರೆಯ ಕಾಲು ಹಿಡಿದು ಕೂರಿಸಿತು ಚಾಕು
ರಾಜ ನಾನೇ ನಿಮ್ಮ ಬಡಾಯಿ ಸಾಕು
ನಾನಿಲ್ಲದೇ ತರಕಾರಿ ಕತ್ತರಿಸಲು ಸಾಧ್ಯವಿಲ್ಲ
ಇಡಿಯ ತರಕಾರಿಯ ಅಡುಗೆ ಅಡುಗೆಯೇ ಅಲ್ಲ
ತೆಪ್ಪಗೆ ಕುಂತ್ಕಳಲೇ ಚಾಕು ನಿಮ್ಮವ್ವನ್
ಎಂದಿತು ಹೊಸಾ ಮೈಕ್ರೋವೇವ್ ಓವನ್
ಕ್ಷಣದಲ್ಲಿ ಅಡುಗೆ ಬಿಸಿ ಮಾಡಿ ನೀಡುವೆ
ಒಡತಿಯ ಶ್ರಮ ಕಡಿಮೆ ಮಾಡುವೆ
ಅಷ್ಟರಲ್ಲಿ ಒಳಬಂದಳು ಮನೆಯ ಒಡತಿ
ಹಿಂದೆ ಹಿಂದೆ ಹೆದರುತ್ತಾ ಆಕೆಯ ಪತಿ
ರೀ, ಬರುವ ತಿಂಗಳು ಹಬ್ಬ ಬೇರೆ
ಬೇಕಾಗಿದೆ ನನಗೊಂದು ಹೊಸ ಸೀರೆ
ಅಲ್ಲಾ ಕಣೆ, ತಿಂಗಳ ಖರ್ಚಿಗೆ ಸರಿಯಾಗಿದೆ ಬಜೆಟ್
ಕೊಳ್ಳಲು ಸಾಧ್ಯವಿಲ್ಲ ಒಂದು ಎಕ್ಸ್‍ಟ್ರಾ ಬಕೆಟ್
ಎಲ್ಲಿಂದ ತರುವುದು ಹೊಸ ಸೀರೆ
ಹಳೆಯ ಸೀರೆಯೇ ಸಾಕು ಬೇಕಿಲ್ಲ ಬೇರೆ
ಬೇರೇನೂ ಹೇಳಲಿಲ್ಲ ಆಕೆ
ತೆಗೆದುಕೊಂಡಳು ಲಟ್ಟಣಿಗೆ ಕೈಗೆ
ನನಗೆ ಹೊಸ ಸೀರೆ ಬೇಕು ಎಂದೆ
ಇಲ್ಲದಿದ್ದರೆ ಏನಾಗುವುದು ನೋಡಿ ಮುಂದೆ
ಕೈಯ ಲಟ್ಟಣಿಗೆ ನೋಡಿದ ಪತಿ
ಅಂದುಕೊಂಡ ಈಗ ದೇವರೆ ಗತಿ
ಆಯ್ತು ನಾಳೆಯೇ ಅಂಗಡಿಗೆ ಹೋಗೋಣ
ನಿನಗಾವ ಸೀರೆ ಬೇಕೋ ಅದನ್ನೇ ಕೊಳ್ಳೋಣ
ಪಾತ್ರೆಗಳ ವ್ಯಾಜ್ಯ ಅಲ್ಲಿಗೆ ಕೊನೆಯಾಯ್ತು
ರಾಜ ಯಾರಾಗಬೇಕೆಂದು ನಿರ್ಧಾರವಾಗಿ ಹೋಯ್ತು.
ee kavana tumba ne funny aagide,
ReplyDeletematte alli use maadiro words kuda ashte tumba haasyakara vaagide,
ತೆಪ್ಪಗೆ ಕುಂತ್ಕಳಲೇ ಚಾಕು ನಿಮ್ಮವ್ವನ್
ಎಂದಿತು ಹೊಸಾ ಮೈಕ್ರೋವೇವ್ ಓವನ್
ee line Superrrrrrb......!!!!!
From,
Nirmala